ಗಣರಾಜ್ಯೋತ್ಸವ ದಿನಾಚರಣೆಗೆ ಅರ್ಥಪೂರ್ಣ ಆಚರಣೆಗೆ ಸಿದ್ಧತೆ: ಜಿಲ್ಲಾಧಿಕಾರಿ ಎಬಿ ಬಸವರಾಜು
ವಿಜಯ ದರ್ಪಣ ನ್ಯೂಸ್….
ಜನವರಿ 26 ರಂದು 77 ನೇ ಗಣರಾಜ್ಯೋತ್ಸವ ದಿನಾಚರಣೆ

…………………………………………
ಗಣರಾಜ್ಯೋತ್ಸವ ದಿನಾಚರಣೆಗೆ ಅರ್ಥಪೂರ್ಣ ಆಚರಣೆಗೆ ಸಿದ್ಧತೆ: ಜಿಲ್ಲಾಧಿಕಾರಿ ಎಬಿ ಬಸವರಾಜು

ಬಿಜಿಎಸ್ ನಗರ ದೇವನಹಳ್ಳಿ ತಾಲ್ಲೂಕು ಬೆಂ.ಗ್ರಾ.ಜಿಲ್ಲೆ, ಜ. 8:
77 ನೇ ಗಣರಾಜ್ಯೋತ್ಸವದ ಅರ್ಥಪೂರ್ಣ ಆಚರಣೆಗೆ ಅಗತ್ಯ ಸಿದ್ಧತೆ ಕೈಗೊಳ್ಳಲು ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ಎಬಿ ಬಸವರಾಜು ಅವರು ಸೂಚಿಸಿದರು.
ಜಿಲ್ಲಾಡಳಿತ ಭವನದ ಜಿಲ್ಲಾಧಿಕಾರಿಯವರ ಕಚೇರಿ ಸಭಾಂಗಣದಲ್ಲಿ ನಡೆದ ಗಣರಾಜ್ಯೋತ್ಸವ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿ
ಜನವರಿ 26 ರಂದು 77 ನೇ ಗಣರಾಜ್ಯೋತ್ಸವ ಆಚರಣೆ ಮಾಡಲಾಗುತ್ತಿದೆ. ಆ ದಿನ ಜಿಲ್ಲಾಡಳಿತ ಭವನದ ಆವರಣದಲ್ಲಿ ಬೆಳಿಗ್ಗೆ 07:30 ಗಂಟೆಗೆ ಧ್ವಜಾರೋಹಣ ನೆರವೇರಿಸಲಾಗುವುದು. ನಂತರ ಬೆಳಿಗ್ಗೆ 9:00 ಗಂಟೆಗೆ ದೇವನಹಳ್ಳಿ ಟೌನ್ ನ ಸರ್ಕಾರಿ ಪದವಿ ಪೂರ್ವ ಕಾಲೇಜು ಆಟದ ಮೈದಾನದಲ್ಲಿ ಜಿಲ್ಲಾಮಟ್ಟದ ಕಾರ್ಯಕ್ರಮ ನಡೆಯಲಿದ್ದು ಅಪರಾಹ್ನ ಬೆಳಿಗ್ಗೆ 09 ಗಂಟೆಗೆ ಜಿಲ್ಲಾ ಉಸ್ತುವಾರಿ ಸಚಿವರಿಂದ ಧ್ವಜಾರೋಹಣ ನೆರವೇರಲಿದೆ.
ಕಾರ್ಯಕ್ರಮದಲ್ಲಿ ರಾಷ್ಟ್ರೀಯ ಪದ್ಮ ಪ್ರಶಸ್ತಿ ಪುರಸ್ಕೃತ ಸಾಧಕರಿಗೆ ಸನ್ಮಾನ ಮಾಡಲಾಗುವುದು. ಜೊತೆಗೆ ಜಿಲ್ಲಾ ಮಟ್ಟದ ಸರ್ವೋತ್ತಮ ಪ್ರಶಸ್ತಿ ಪುರಸ್ಕೃತರಿಗೆ ಪ್ರಶಸ್ತಿ ಪ್ರದಾನ ಮಾಡಲಾಗುವುದು.
ಶಿಷ್ಟಾಚಾರದಂತೆ ಆಹ್ವಾನ ಪತ್ರಿಕೆಯನ್ನು ಮುದ್ರಿಸಿ ಜನಪ್ರತಿನಿಧಿಗಳಿಗೆ ತಲುಪಿಸಿ, ವೇದಿಕೆ ಮತ್ತು ಧ್ವಜ ಕಟ್ಟೆ ಅಲಂಕಾರವನ್ನು ಅಚ್ಚುಕಟ್ಟಾಗಿ ನೆರವೇರಿಸಿ ಯಾವುದೇ ಕಾರಣಕ್ಕೂ ಪ್ಲಾಸ್ಟಿಕ್ ವಸ್ತುಗಳನ್ನು ಬೆಳೆಸಬಾರದು, ಪಥ ಸಂಚಲನಕ್ಕೆ ಅಗತ್ಯ ಕ್ರಮ ವಹಿಸಿ ಎನ್ಎಸ್ಎಸ್, ಎನ್ ಸಿಸಿ, ಸ್ಕೌಟ್ಸ್ ಗೈಡ್ಸ್ ವಿದ್ಯಾರ್ಥಿಗಳನ್ನು ಭಾಗವಹಿಸಲು ಕ್ರಮ ವಹಿಸಿ ಎಂದರು.
ಗಣರಾಜ್ಯೋತ್ಸವ ಕಾರ್ಯಕ್ರಮಕ್ಕೆ ಸಾಂಸ್ಕೃತಿಕ ಕಾರ್ಯಕ್ರಮಗಳು ಹಮ್ಮಿಕೊಳ್ಳಲು ಮೂರು ದಿನಗಳ ಪೂರ್ವಾಭ್ಯಾಸ ಇರಲಿದೆ. ಈ ಸಂದರ್ಭದಲ್ಲಿ ಶಾಲಾ ಮಕ್ಕಳಿಗೆ, ಸಿಬ್ಬಂದಿಗೆ ಉಪಹಾರ, ಕುಡಿಯುವ ನೀರು ಒದಗಿಸಲು ಹಿಂದುಳಿದ, ಸಮಾಜ ಕಲ್ಯಾಣ, ಆಹಾರ ಇಲಾಖೆ ಅಧಿಕಾರಿಗಳಿಗೆ ಸೂಚಿಸಿದರು.
ಕಾರ್ಯಕ್ರಮಕ್ಕೆ ಕಡ್ಡಾಯವಾಗಿ ಜಿಲ್ಲಾ ಮಟ್ಟದ ಎಲ್ಲಾ ಅಧಿಕಾರಿಗಳು ಭಾಗವಹಿಸಬೇಕು. ಜೊತೆಗೆ ಅಧಿಕಾರಿಗಳಿಗೆ ನೀಡಿರುವ ಜವಾಬ್ದಾರಿಯನ್ನು ಅಚ್ಚುಕಟ್ಟಾಗಿ ನಿಭಾಯಿಸಿ ಕಾರ್ಯಕ್ರಮ ಯಶಸ್ವಿಗೊಳಿಸಬೇಕು ಎಂದು ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ಸೂಚಿಸಿದರು.
*ಜ.25 ಕ್ಕೆ ರಾಷ್ಟ್ರೀಯ ಮತದಾರರ ದಿನಾಚರಣೆ*
ಜನವರಿ 25 ಕ್ಕೆ ಎಲ್ಲಾ ತಾಲ್ಲೂಕುಗಳಲ್ಲಿ, ಜಿಲ್ಲಾ ಮಟ್ಟದಲ್ಲಿ ರಾಷ್ಟ್ರೀಯ ಮತದಾರರ ದಿನಾಚರಣೆ-2026 ಅನ್ನು ಆಚರಿಸಲಾಗುವುದು. ಇದಕ್ಕೆ ಪೂರ್ವಭಾವಿಯಾಗಿ ಜಿಲ್ಲೆಯಲ್ಲಿನ ಪದವಿ ಪೂರ್ವ ಮೇಲ್ಪಟ್ಟ ಎಲ್ಲ ಕಾಲೇಜುಗಳಲ್ಲಿ ಮತದಾನದ ಬಗ್ಗೆ ಅರಿವು ಮೂಡಿಸಬೇಕು. ಕಾಲೇಜುಗಳಲ್ಲಿ ಪ್ರಬಂಧ ಸ್ಪರ್ಧೆ, ಭಾಷಣ ಸ್ಪರ್ಧೆ, ಮುಂತಾದ ಸಾಂಸ್ಕೃತಿಕ ಸ್ಪರ್ಧೆ, ಕಾರ್ಯಕ್ರಮಗಳನ್ನು ಆಯೋಜನೆ ಮಾಡುವ ಮೂಲಕ 17 ವರ್ಷ ಮೇಲ್ಪಟ್ಟ ಯುವ ಸಮೂಹಕ್ಕೆ ಚುನಾವಣೆ ಪ್ರಕ್ರಿಯೆ, ಮತದಾನದ ಮಹತ್ವದ ಬಗ್ಗೆ ಜಾಗೃತಿ ಮೂಡಿಸಿ ಎಂದು ಅಧಿಕಾರಿಗಳಿಗೆ ಸೂಚಿಸಿದರು.
ಜನವರಿ 25 ರಂದು ತಾಲ್ಲೂಕು ಮಟ್ಟದಲ್ಲಿ, ಜಿಲ್ಲಾ ಮಟ್ಟದಲ್ಲಿ ರಾಷ್ಟ್ರೀಯ ಮತದಾರರ ದಿನಾಚರಣೆ ಆಯೋಜಿಸಿ ಸೈಕಲ್ ಜಾಥಾ, ಬೈಕ್ ಜಾಥಾ ಮೂಲಕ ಅರಿವು ಕಾರ್ಯಕ್ರಮ ಹಮ್ಮಿಕೊಳ್ಳಬೇಕು. ವೇದಿಕೆ ಕಾರ್ಯಕ್ರಮಕ್ಕೆ ನ್ಯಾಯಮೂರ್ತಿಗಳನ್ನು ಆಹ್ವಾನಿಸಿ ಪ್ರತಿಜ್ಞಾ ವಿಧಿ ಸ್ವೀಕರಿಸಬೇಕು. ಜೊತೆಗೆ ಮತದಾರರಿಗೆ ಎಪಿಕ್ ಕಾರ್ಡ್ ವಿತರಣೆ, ಬಿಎಲ್ಒ ಗಳಿಗೆ ಕಿಟ್ ವಿತರಣೆ, ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಬಹುಮಾನ ವಿತರಣೆ ಆಯೋಜಿಸಿ ಮತದಾನದ ಬಗ್ಗೆ ಸಾರ್ವಜನಿಕರಿಗೆ ಅರಿವು ಮೂಡಿಸಿ ಎಂದರು.
ದೇವನಹಳ್ಳಿಯಲ್ಲಿ ಜಿಲ್ಲಾ ಮಟ್ಟದ ಸರ್ಕಾರಿ ನೌಕರರ ಕ್ರೀಡಾಕೂಟ ಆಯೋಜನೆಗೆ ಅಗತ್ಯ ಸಿದ್ಧತೆ ಕೈಗೊಳ್ಳಲು ಅಧಿಕಾರಿಗಳಿಗೆ ಸೂಚಿಸಿದರು.
ಸಭೆಯಲ್ಲಿ ಅಪರ ಜಿಲ್ಲಾಧಿಕಾರಿ, ಜಿಪಂ ಉಪಕಾರ್ಯದರ್ಶಿ , ಯೋಜನಾಧಿಕಾರಿ ಸೇರಿದಂತೆ ಜಿಲ್ಲಾ ಮಟ್ಟದ, ತಾಲ್ಲೂಕು ಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.
ಜನವರಿ. 15 ರಂದು ಶಿವಗಂಗೆಯಲ್ಲಿ ‘ಗಿರಿಜಾ ಕಲ್ಯಾಣ’ ಮಹೋತ್ಸವ

ಬೆಂಗಳೂರು ಗ್ರಾಮಾಂತರ ಜಿಲ್ಲೆ, ಜ. 08: ನೆಲಮಂಗಲ ತಾಲ್ಲೂಕಿನ ದಕ್ಷಿಣ ಕಾಶಿ ಶಿವಗಂಗೆ ಗ್ರಾಮದ ಶ್ರೀ ಗಂಗಾಧರೇಶ್ವರಸ್ವಾಮಿ ಮತ್ತು ಹೊನ್ನಾದೇವಿ ದೇವಸ್ಥಾನದ ವಾರ್ಷಿಕ “ಗಿರಿಜಾ ಕಲ್ಯಾಣ” ಮಹೋತ್ಸವವನ್ನು ಜನವರಿ 15 ಗುರುವಾರದಂದು ಧಾರ್ಮಿಕ ದತ್ತಿ ಇಲಾಖೆ ವತಿಯಿಂದ ಆಯೋಜಿಸಲಾಗಿದೆ.
ಜನವರಿ 12 ರಿಂದ ಜನವರಿ 20 ರವರೆಗೆ ದೇವಾಲಯದಲ್ಲಿ ವಿವಿಧ ಪೂಜಾ ಕೈಂಕರ್ಯಗಳು ನೆರವೇರಲಿದ್ದು ಭಕ್ತಾದಿಗಳು ಉತ್ಸವದಲ್ಲಿ ಭಾಗವಹಿಸಲು ಶಿವಗಂಗೆ ಶ್ರೀ ಗಂಗಾಧರೇಶ್ವರಸ್ವಾಮಿ ಮತ್ತು ಹೊನ್ನಾದೇವಿ ಸಮೂಹ ದೇವಾಲಯಗಳ ಕಾರ್ಯನಿರ್ವಾಹಕ ಅಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಜನವರಿ .9 ರಿಂದ 12 ವರೆಗೆ ಡಿಜಿಟಲ್ ಇ-ಸ್ಟಾಂಪ್ ತರಬೇತಿ
ಬೆಂಗಳೂರು ಗ್ರಾಮಾಂತರ ಜಿಲ್ಲೆ, ಜನವರಿ. 08:
ರಾಜ್ಯಾದ್ಯಂತ ಡಿಜಿಟಲ್ ಇ-ಸ್ಟಾಂಪ್ ವ್ಯವಸ್ಥೆಯನ್ನು ಜಾರಿಗೊಳಿಸುವ ಸಂಬಂಧ ತರಬೇತಿಯನ್ನು ಬೆಂಗಳೂರು ಗ್ರಾಮಾಂತರ ಜಿಲ್ಲಾ ನೋಂದಣಿ ವ್ಯಾಪ್ತಿಯ ಎಲ್ಲಾ ಉಪನೋಂದಣಿ ಕಛೇರಿಗಳಲ್ಲಿ ಜನವರಿ 09 ರಿಂದ 12 ವರೆಗೆ ತರಬೇತಿ ಹಮ್ಮಿಕೊಳ್ಳಲಾಗಿದೆ.
ದೇವನಹಳ್ಳಿ ತಾಲ್ಲೂಕು ಉಪ ನೋಂದಣಿ ಕಚೇರಿಯ ತರಬೇತಿಯು ಜನವರಿ 09 ರಂದು ಬೆಳಿಗ್ಗೆ 11:00 ಗಂಟೆಗೆ ದೇವನಹಳ್ಳಿ ತಾಲ್ಲೂಕು ತಹಶೀಲ್ದಾರ್ ರ ಕೋರ್ಟ್ ಆವರಣದಲ್ಲಿ ನಡೆಯಲಿದೆ, ದೊಡ್ಡಬಳ್ಳಾಪುರ ಉಪ ನೋಂದಣಿ ಕಚೇರಿಯ ತರಬೇತಿಯು ಜ. 09 ರಂದು ಮಧ್ಯಾಹ್ನ 3:00 ಗಂಟೆಗೆ ಉಪ ನೋಂದಣಾಧಿಕಾರಿಗಳ ಕಚೇರಿ ಆವರಣ ದೊಡ್ಡಬಳ್ಳಾಪುರದಲ್ಲಿ ನಡೆಯಲಿದೆ, ನೆಲಮಂಗಲ ಉಪ ನೋಂದಣಿ ಕಚೇರಿಯ ತರಬೇತಿಯು ಜ.12 ರಂದು ಬೆಳಿಗ್ಗೆ 11.00 ಗಂಟೆಗೆ ಉಪನೋಂದಣಿ ಕಚೇರಿ ಆವರಣ ನೆಲಮಂಗಲ ಇಲ್ಲಿ ನಡೆಯಲಿದೆ, ಹೊಸಕೋಟೆ ಉಪ ನೋಂದಣಿ ಕಚೇರಿಯ ತರಬೇತಿಯು ಜ. 12 ರಂದು ಮಧ್ಯಾಹ್ನ 3:00 ಗಂಟೆಗೆ ಉಪ ನೋಂದಣಿ ಕಚೇರಿ ಹೊಸಕೋಟೆಯಲ್ಲಿ ನಡೆಯಲಿದೆ.
ಡಿಜಿಟಲ್ ಇ-ಸ್ಟಾಂಪಿಂಗ್ ವ್ಯವಸ್ಥೆಯ ಕುರಿತ ತರಬೇತಿಯನ್ನು ದಸ್ತಾವೇಜು ಬರಹಗಾರರು, ವಕೀಲರು, ಕರ್ನಾಟಕ ಒನ್, ಬೆಂಗಳೂರು ಒನ್, ಗ್ರಾಮ ಒನ್ ಮತ್ತು ಬಾಪೂಜಿ ಸೇವಾ ಕೇಂದ್ರ ಹಾಗೂ SHCIL ಮೂಲಕ ವಿತರಿಸುತ್ತಿರುವ ಡಿಜಿಟಲ್ ಇ-ಸ್ಟಾಂಪಿಂಗ್ ಮಾರಾಟ ವ್ಯವಸ್ಥೆಯನ್ನು ನಿರ್ವಹಿಸುತ್ತಿರುವ ಸಹಕಾರಿ ಸೌಹಾರ್ದ ಬ್ಯಾಂಕ್ ಗಳ ಸಿಬ್ಬಂದಿಗಳಿಗೆ ಆಯೋಜಿಸಲಾಗಿದ್ದು ಸಂಬಂಧಿಸಿದವರು ಆಯಾ ತಾಲೂಕಿನ ವ್ಯಾಪ್ತಿಯ ತರಬೇತಿಯಲ್ಲಿ ಭಾಗವಹಿಸಿ ತರಬೇತಿಯ ಸದುಪಯೋಗ ಪಡೆದುಕೊಳ್ಳಬೇಕು ಎಂದು ನೋಂದಣಿ ಮತ್ತು ಮುದ್ರಾಂಕ ಇಲಾಖೆಯ ಜಿಲ್ಲಾ ನೋಂದಣಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
