ವಿವಿಧ ಕಾಮಾಗಾರಿಗಳನ್ನು ಉದ್ಘಾಟನೆ ಮಾಡಿದ ಉಸ್ತುವಾರಿ ಸಚಿವ ಡಾ.ಎಂ ಸಿ ಸುಧಾಕರ್
ವಿಜಯ ದರ್ಪಣ ನ್ಯೂಸ್….
ಶಿಡ್ಲಘಟ್ಟ ತಾಲ್ಲೂಕಿನಲ್ಲಿ ವಿವಿಧ ಕಾಮಾಗಾರಿಗಳನ್ನು ಉದ್ಘಾಟನೆ ಮಾಡಿದ ಉಸ್ತುವಾರಿ ಸಚಿವ ಡಾ. ಎಂ ಸಿ ಸುಧಾಕರ್
ಶಿಡ್ಲಘಟ್ಟ : ಸರ್ವಜನರ ಅಭಿವೃದ್ಧಿಯೇ ನಮಗೆ ಮುಖ್ಯ ನಿಮ್ಮ ದ್ವಂದ್ವ ನಿಲುವನ್ನು ಬಿಡಿ ರೈತರ ಕುರಿತಾದ ನನ್ನ ಕಾಳಜಿ ಮತ್ತು ಬದ್ದತೆಯ ಬಗ್ಗೆ ಪ್ರಶ್ನೆ ಮಾಡುವುದಕ್ಕೆ ನಿಮಗೆ ಯಾರಿಗೂ ಅರ್ಹತೆಯಿಲ್ಲ ನಿಮಗಿಂತ ಹೆಚ್ಚಿನ ರೈತರು ನಾವು ನೀವುಗಳು ಸ್ವತಃ ಲೇಬಲ್ ಹಾಕಿಕೊಂಡು, ರೈತೋದ್ಧಾರಕರು ಎಂಬ ಮನಸ್ಥಿತಿಯಲ್ಲಿ ಯಾರ ಬಗ್ಗೆ ಏನು ಬೇಕಾದರೂ ಮಾತನಾಡಬಹುದು ಎಂಬುದನ್ನು ಬಿಡಿ ಎಂದು ಉನ್ನತ ಶಿಕ್ಷಣ ಹಾಗು ಜಿಲ್ಲಾ ಉಸ್ತುವಾರಿ ಸಚಿವರಾದ ಎಂ.ಸಿ.ಸುಧಾಕರ್ ಆಕ್ರೋಶದಿಂದ ನುಡಿದರು.
ತಾಲ್ಲೂಕಿನ ಜಂಗಮಕೋಟೆ ಗ್ರಾಮದಲ್ಲಿ ನೂತನವಾಗಿ ನಿರ್ಮಿಸಿರುವ “ಭಾರತ್ ನಿರ್ಮಾಣ್ ರಾಜೀವ್ ಗಾಂಧಿ ಸೇವಾ ಕೇಂದ್ರದ ಕಟ್ಟಡ, ಆನೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಬೆಳ್ಳೂಟಿ ಗ್ರಾಮದಲ್ಲಿ ನೂತನವಾಗಿ ನಿರ್ಮಿಸಿರುವ “ಗ್ರಾಮ ಪಂಚಾಯಿತಿ ಅರಿವು ಕೇಂದ್ರದ ಕಟ್ಟಡ”, ಚೀಮಂಗಲ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ನೂತನವಾಗಿ ನಿರ್ಮಿಸಿರುವ ಗ್ರಾಮ ಪಂಚಾಯಿತಿ ಅರಿವು ಕೇಂದ್ರದ ಕಟ್ಟಡ ಹಾಗೂ ನಾಮಫಲಕ, ಹನುಮಂತಪುರ ಗೇಟ್ ಬಳಿ ನೂತನವಾಗಿ ನಿರ್ಮಿಸಿರುವ ಕೃಷಿ ಇಲಾಖೆಯ ಸಹಾಯಕ ನಿರ್ದೇಶಕರ ಕಾರ್ಯಾಲಯ ಕಟ್ಟಡದ ಹಾಗೂ ಕಸಬಾ ಹೋಬಳಿ ಮತ್ತು ಬಶೆಟ್ಟಹಳ್ಳಿಯಲ್ಲಿ ನೂತನವಾಗಿ ನಿರ್ಮಿಸಿರುವ ರೈತ ಸಂಪರ್ಕ ಕೇಂದ್ರ ಕಟ್ಟಡಗಳು, ತಾಲ್ಲೂಕಿನ ವರದನಾಯಕನಹಳ್ಳಿಯಲ್ಲಿ ನೂತನವಾಗಿ ನಿರ್ಮಿಸಿರುವ “ದೇವರಾಜ ಅರಸು ಭವನ” ಕಟ್ಟಡದ ಉದ್ಘಾಟನೆ, ಹಂಡಿಗನಾಳ ಗ್ರಾಮ ಪಂಚಾಯಿತಿಯ ನೂತನ ಕಾರ್ಯಾಲಯ ಉದ್ಘಾಟನೆ ಮತ್ತು ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ನೂತನವಾಗಿ ನಿರ್ಮಿಸಲು ಉದ್ದೇಶಿಸಿರುವ ತರಗತಿ ಕೊಠಡಿ, ಪ್ರಯೋಗಾಲಯ, ಶೌಚಾಲಯ ಮತ್ತು ಇತರೆ ನಿರ್ಮಾಣ ಕಾಮಗಾರಿಗಳ ಶಂಕುಸ್ಥಾಪನೆಯನ್ನು ನೆರವೇರಿಸಿ ಅವರು ಮಾತನಾಡಿದರು
ಈ ಭಾಗದಲ್ಲಿ ಕೈಗಾರಿಕೆ ಬೇಡ ದಿಬ್ಬೂರಹಳ್ಳಿ ಭಾಗದಲ್ಲಿ ಮಾಡಿ ಎನ್ನುವರಲ್ಲ, ಹಾಗಿದ್ದರೆ ದಿಬ್ಬೂರಹಳ್ಳಿ ಭಾಗದ ರೈತರು ಇವರಿಗೆ ಅನುಮತಿ ಕೊಟ್ಟಿದ್ದಾರೆಯೇ ಅವರ ಪರವಾಗಿ ನೀವು ಹೇಗೆ ತೀರ್ಮಾನಗಳನ್ನು ತೆಗೆದುಕೊಳ್ಳುತ್ತೀರಿ ಎಂದು ಕೇಳಿದರು.
ನಿಮಗೆ ಸಾಕಷ್ಟು ಗೌರವ ಕೊಟ್ಟಿದ್ದೇನೆ. ನಮಗೂ ಸ್ವಾಭಿಮಾನವಿದೆ. ನಮ್ಮ ಮುಂದೆ ಒಂದು ಹಿಂದೆ ಒಂದು ಮಾತನಾಡುವುದನ್ನು ಸಹಿಸಲು ಸಾಧ್ಯವಿಲ್ಲ. ನೀವು ಹೇಳಿದ ಹಾಗೆ ಕೇಳಬೇಕು, ನೀವು ತೋರಿಸಿದ ದಾರಿಯಲ್ಲಿಯೇ ನಡೆಯಬೇಕು ಎಂಬ ಧೋರಣೆ ಸರಿಯಲ್ಲ. ಜನಪ್ರತಿನಿಧಿಗಳಾದ ನಾವು ಸರ್ವಜನರ ಏಳಿಗೆಯನ್ನು ಗಮನದಲ್ಲಿರಿಸಿಕೊಂಡು ನಮ್ಮ ಜವಾಬ್ದಾರಿಗಳನ್ನು ನಿರ್ವಹಿಸುತ್ತೇವೆ. ನೀವು ಒತ್ತಾಯಪೂರ್ವಕವಾಗಿ ನಮಗೆ ಆದೇಶಿಸುವುದು ತರವಲ್ಲ ಅಸಾಮದಾನ ವ್ಯಕ್ತಪಡಿಸಿದರು.
ಪ್ರತಿಪಕ್ಷಗಳ ವಿರುದ್ಧ ವಾಗ್ದಾಳಿ : ಮುಖ್ಯಮಂತ್ರಿ ಕಾರ್ಯಕ್ರಮದಲ್ಲಿ ಕಪ್ಪು ಬಾವುಟ ತೋರಿಸಲು ಪ್ರಯತ್ನಿಸಿದ ಪ್ರಕರಣದ ಬಗ್ಗೆ ಮಾತನಾಡಿದ ಸಚಿವರು, “ಸಮಾರಂಭವೊಂದರಲ್ಲಿ ಕಪ್ಪು ಬಾವುಟ ತೋರಿಸುವುದು ಸಭ್ಯತೆಯಲ್ಲ ಸಮಾಜದಲ್ಲಿ ಅಶಾಂತಿಯನ್ನು ಮೂಡಿಸುವುದು, ಗೊಂದಲ ಮೂಡಿಸುವುದು, ಜಾತಿ ಧರ್ಮದ ಹೆಸರಿನಲ್ಲಿ ರಾಜಕಾರಣ ಮಾಡಬಯಸುವ ಬಿಜೆಪಿ ಈ ರೀತಿಯ ರಾಜಕೀಯ ಕುತಂತ್ರಗಳ ಮೂಲಕ ಸಭೆಯಲ್ಲಿ ಅಡ್ಡಿಪಡಿಸುವ ಕೆಲಸ ಮಾಡಿದೆ. ಇಂತಹ ನಡೆಯು ಜನವಿರೋಧಿ” ಎಂದು ಹೇಳಿದರು.
ಈ ಸಂದರ್ಭದಲ್ಲಿ ಶಾಸಕ ಬಿ.ಎನ್.ರವಿಕುಮಾರ್, ಪಿ.ಎಲ್.ಡಿ.ಬ್ಯಾಂಕ್ ಅಧ್ಯಕ್ಷ ಬಂಕ್ ಮುನಿಯಪ್ಪ, ತಾಲ್ಲೂಕು ಪಂಚಾಯಿತಿ ಮಾಜಿ ಅಧ್ಯಕ್ಷ ಕೆ.ಲಕ್ಷ್ಮೀನಾರಾಯಣರೆಡ್ಡಿ, ತಾಲ್ಲೂಕು ಪಂಚಾಯಿತಿ ಇ.ಒ.ಹೇಮಾವತಿ,ತಹಶೀಲ್ದಾರ್ ಬಿ.ಎನ್.ಸ್ವಾಮಿ, ನಗರಸಭೆ ಅಧ್ಯಕ್ಷ ವೆಂಕಟಸ್ವಾಮಿ, ಸರ್ಕಲ್ ಇನ್ಸ್ ಪೆಕ್ಟರ್ ಶ್ರೀನಿವಾಸ್ ಮುಂತಾದವರು ಹಾಜರಿದ್ದರು.